ಮೇವು ಅಭಿವೃದ್ಧಿ
Fodder Production Plot ಕ್ಷೇತ್ರದ ಒಟ್ಟು ವಿಸ್ತೀರ್ಣ 402.25 ಹೆಕ್ಟೇರ್ (994 ಎಕರೆ) ನಲ್ಲಿ 48.96 ಹೆಕ್ಟೇರ್ (121 ಎಕರೆ) ನ ಭೂಮಿಯನ್ನು ಮೇವು ಬೆಳೆಗಳ ಉತ್ಪಾದನೆಗಾಗಿ ಬಳಸಲಾಗುತ್ತಿದೆ. ನೀರಾವರಿ ವ್ಯವಸ್ಥೆಯೊಂದಿಗೆ ಕ್ಷೇತ್ರದಲ್ಲಿನ ಎಲ್ಲಾ ಜಾನುವಾರುಗಳಿಗೆ ಬಹುತೇಕ ವರ್ಷವಿಡೀ ಸಾಕಷ್ಟು ಹಸಿರು ಮೇವು ದೊರೆಯುವಂತೆ ವಿವಿಧ ಮೇವಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಬಳಕೆಯಾಗಿ ಉಳಿದ ಹಸಿರು ಮೇವನ್ನು ‘ಒಣಗಿಸಿದ ಹಸಿರು ಮೇವು’ ಮಾಡಿ ಶೇಖರಿಸಿಟ್ಟು ಹಸಿರು ಮೇವಿನ ಕೊರತೆಯ ಸಂದರ್ಭಗಳಲ್ಲಿ ಬಳಸಲಾಗುತ್ತದೆ ಹಾಗೂ ಉಳಿದದ್ದನ್ನು ಬೇಡಿಕೆಗನುಗುಣವಾಗಿ ಸರ್ಕಾರದ ಇತರೆ ಕ್ಷೇತ್ರಗಳಿಗೆ ಕೂಡ ಸರಬರಾಜು ಮಾಡಲಾಗುತ್ತದೆ.

ನೀರಾವರಿ ಪ್ರದೇಶದಲ್ಲಿ ವಿವಿಧ ಮೇವಿನ ಬೆಳೆಗಳಾದ ಅಫ್ರಿಕನ್ ಟಾಲ್ ಮೆಕ್ಕೆ ಜೋಳ, ರೋಡ್ಸ್, ಗ್ರೀನ್ ಪ್ಯಾನಿಕ್, ಕೋ-3, ಗಿನಿ ಹುಲ್ಲು, ನೇಪಿಯರ್, ಕುದುರೆ ಮಸಾಲೆ, ಮೇವಿನ ಹಲಸಂದೆ ಇತ್ಯಾದಿಗಳನ್ನು ಜಾನುವಾರುಗಳ ಉಪಯೋಗಕ್ಕಾಗಿ ಬೆಳೆಯಲಾಗುತ್ತದೆ. ಮಳೆಯಾಧಾರಿತ ಪ್ರದೇಶದಲ್ಲಿ ಅರಣ್ಯ ಹುಲ್ಲುಗಾವಲಿನ ನಿರ್ವಹಣೆ ಮಾಡಲಾಗಿದೆ ಹಾಗೂ ಉಳಿದ ಅರಣ್ಯ ಪ್ರದೇಶದಲ್ಲಿ ಅಕೇಷಿಯಾ ಪ್ಲಾಂಟೇಶನ್ ಮಾಡಿ ನಿರ್ವಹಿಸಲಾಗುತ್ತಿದೆ.

ಕ್ಷೇತ್ರಕ್ಕೆ ತರಬೇತಿಗಾಗಿ ಬರುವ ರೈತರು ವಿವಿಧ ಮೇವಿನ ಬೆಳೆಗಳ ಬಗ್ಗೆ ಅರಿವು ಪದೆಯಲು ಅನುಕೂಲವಾಗುವಂತೆ ವಿವಿಧ ಮೇವಿನ ಬೆಳೆಗಳ ಪ್ರಾತ್ಯಕ್ಷತಾ ಘಟಕಗಳನ್ನು ಸಹ ಅಭಿವೃದ್ಧಿಗೊಳಿಸಿ ನಿರ್ವಹಿಸಲಾಗುತ್ತಿದೆ.

ಕೇಂದ್ರ ಸರ್ಕಾರದಿಂದ ಸರಬರಾಜಾಗುವ ವಿವಿಧ ಸುಧಾರಿತ ಮೇವಿನ ಬೆಳೆಗಳ ಬೀಜಗಳನ್ನು ರಾಜ್ಯದ ವಿವಿಧ ಜಿಲ್ಲೆಗಳ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರುಗಳ ಮೂಲಕ ರೈತರಿಗೆ ವಿತರಿಸಲಾಗುತ್ತಿದೆ.

ಈ ಕೇಂದ್ರದಲ್ಲಿ ಬೆಳೆಯುವ ಕೆಲವು ಉತ್ತಮ ಮೇವಿನ ಬೆಳೆಗಳ ಹುಲ್ಲು ಬೇರುಗಳನ್ನು ಆಸಕ್ತ ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ.

ಕ್ಷೇತ್ರದಲ್ಲಿನ ನೀರಾವರಿಗೆ ಒಳಪಡದ ಭೂಮಿಯನ್ನು ಇಲ್ಲಿನ ಜಾನುವಾರುಗಳನ್ನು ಮೇಯಿಸಲು ಉಪಯೋಗಿಸಲಾಗುತ್ತದೆ. ಹಾಗೂ ಮಳೆಗಾಲದಲ್ಲಿ ಸೂಕ್ತ ಮೇವಿನ ಬೆಳೆಗಳನ್ನೂ ಸಹ ಬೆಳೆಯಲಾಗುತ್ತದೆ.