ಚಟುವಟಿಕೆಗಳು
ತರಬೇತಿ ಕಾರ್ಯಾಕ್ರಮ

ಹೈನುಗಾರಿಕೆ, ಅತ್ಯಾಧುನಿಕ ಪಶುಪಾಲನಾ ಪದ್ಧತಿಗಳು ಮತ್ತು ಮೇವು ಉತ್ಪಾದನೆಯ ವಿಷಯಗಳ ಬಗ್ಗೆ ತಿಳುವಳಿಕೆ ಹಾಗೂ ಸೂಕ್ತ ಮಾಹಿತಿ ನೀಡುವುದು ಈ ತರಬೇತಿಯ ಪ್ರಮುಖ ಅಂಶವಾಗಿರುತ್ತದೆ. ಈ ತರಬೇತಿ ಕಾರ್ಯಕ್ರಮದಲ್ಲಿ ರೈತರು, ರೈತ ಮಹಿಳೆಯರು, ನಿರುದ್ಯೋಗಿ ಯುವಜನಾಂಗ, ವಿವಿಧ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು, ಮಹಿಳಾ ಮತ್ತು ಸಮಾಜ ಸೇವಾ ಸಂಘಗಳ ಸದಸ್ಯರು, ಅಂತಿಮ ವರ್ಷದ ಪಶುವೈದ್ಯಕೀಯ ಕಾಲೇಜುಗಳ (ಬೆಂಗಳೂರು, ಬೀದರ, ಪಾಂಡಿಚೆರಿ) ಕಿರಿಯ ಪಶುವೈದ್ಯರು ಭಾಗವಹಿಸುತ್ತಾರೆ.
ಶುದ್ಧ ತಳಿ

ಶುದ್ಧ ಜರ್ಸಿ ತಳಿಯ ಹಸುಗಳನ್ನು ಕ್ಷೇತ್ರದಲ್ಲಿ ಹೊಂದಿದ್ದು, ಅವುಗಳನ್ನು ಹಾಲು ಉತ್ಪಾದನೆ, ರೈತರಿಗೆ ಪ್ರಾಯೋಗಿಕ ಪ್ರಾತ್ಯಕ್ಷತೆ, ಕಿರಿಯ ಪಶುವೈದ್ಯರುಗಳಿಗೆ ನಿರ್ವಹಣಾ ಪದ್ಧತಿಗಳ ಕಲಿಕೆ ಹಾಗೂ ಭ್ರೂಣ ವರ್ಗಾವಣೆ ತಂತ್ರಜ್ಞಾನದಿಂದ ಉತ್ತಮ ಇಳುವರಿ ಹೊಂದಿರುವ ಶುದ್ಧ ತಳಿ ಹೊರಿಗಳನ್ನು ಪಡೆಯಲು ಬಳಸಲಾಗುತ್ತಿದೆ.
ಘನೀಕೃತ ವೀರ್ಯ

ಈ ಕ್ಷೇತ್ರದಲ್ಲಿ ಅತ್ಯುತ್ತಮ ಹಾಲಿನ ಉತ್ಪಾದನೆಯ ಸಾಮರ್ಥ್ಯದ ವಂಶಾವಳಿಯನ್ನು ಹೊಂದಿರುವ ಹೆಚ್. ಎಫ್. ಮತ್ತು ಜರ್ಸಿ ಹೋರಿಗಳು ಹಾಗೂ ಸೂರ್ತಿ ಮತ್ತು ಮುರ್ರಾ ಕೋಣಗಳಿಂದ ಉತ್ಪಾದಿಸಿದ ಘನೀಕೃತ ವೀರ್ಯ ನಳಿಕೆಗಳನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವಿವಿಧ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿರುವ ಕೃತಕ ಗರ್ಭಧಾರಣೆಗೆ ಕರ್ನಾಟಕ ರಾಜ್ಯಾದ್ಯಂತ ಬಳಸಲಾಗುತ್ತಿದೆ. ಈ ಕ್ಷೇತ್ರವು ಉತ್ತಮ ವಂಶಾವಳಿಯ ಹೋರಿಗಳ ನಿರ್ವಹಣೆ, ಉತ್ತಮ ಗುಣಮಟ್ಟದ ಘನೀಕೃತ ವಿರ್ಯದ ಉತ್ಪಾದನೆ ಹಾಗೂ ನಿರ್ವಹಣೆಗಾಗಿ ISO 9001:2000 ದೃಢೀಕರಣ ಹೊಂದಿದೆ.
ಮೇವು ಅಭಿವೃದ್ಧಿ

ಈ ಕೇಂದ್ರದಲ್ಲಿ ಬೆಳೆಯುವ ಕೆಲವು ಉತ್ತಮ ಮೇವಿನ ಬೆಳೆಗಳ ಹುಲ್ಲು ಬೇರುಗಳನ್ನು ಆಸಕ್ತ ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ನೀರಾವರಿ ವ್ಯವಸ್ಥೆಯೊಂದಿಗೆ ಕ್ಷೇತ್ರದಲ್ಲಿನ ಎಲ್ಲಾ ಜಾನುವಾರುಗಳಿಗೆ ಬಹುತೇಕ ವರ್ಷವಿಡೀ ಸಾಕಷ್ಟು ಹಸಿರು ಮೇವು ದೊರೆಯುವಂತೆ ವಿವಿಧ ಮೇವಿನ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಬಳಕೆಯಾಗಿ ಉಳಿದ ಹಸಿರು ಮೇವನ್ನು ‘ಒಣಗಿಸಿದ ಹಸಿರು ಮೇವು’ ಮಾಡಿ ಶೇಖರಿಸಿಟ್ಟು ಹಸಿರು ಮೇವಿನ ಕೊರತೆಯ ಸಂದರ್ಭಗಳಲ್ಲಿ ಬಳಸಲಾಗುತ್ತದೆ ಹಾಗೂ ಉಳಿದದ್ದನ್ನು ಬೇಡಿಕೆಗನುಗುಣವಾಗಿ ಸರ್ಕಾರದ ಇತರೆ ಕ್ಷೇತ್ರಗಳಿಗೆ ಕೂಡ ಸರಬರಾಜು ಮಾಡಲಾಗುತ್ತದೆ.
ಭ್ರೂಣ ವರ್ಗಾವಣೆ ತಂತ್ರಜ್ಞಾನ

ಭಾರತ ಸರ್ಕಾರ ಹಾಗೂ ಕರ್ನಾಟಕ ರಾಜ್ಯದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ಜಾನುವಾರು ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಉತ್ತಮ ವಂಶಾವಳಿ ಇರುವ ಹೋರಿ ಕರುಗಳು ಮತ್ತು ಹೆಣ್ಣು ಕರುಗಳ ಸಂತಾನಾಭಿವೃದ್ಧಿಗಾಗಿ ಭ್ರೂಣ ವರ್ಗಾವಣೆ ತಂತ್ರಜ್ಞಾನವನ್ನು ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.